ಕಿಕ್ಕೇರಿ

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಒಂದು ಗ್ರಾಮ ಮತ್ತು ಅದೇ ಹೆಸರಿನ ಹೋಬಳಿಯ ಕೇಂದ್ರ ಕೃಷ್ಣರಾಜಪೇಟೆಗೆ 8 ಮೈ. ಮತ್ತು ಶ್ರವಣಬೆಳಗೊಳಕ್ಕೆ 10 ಮೈ. ದೂರದಲ್ಲಿ  ಕೃಷ್ಣರಾಜಪೇಟೆ- ಚೆನ್ನರಾಯಪಟ್ಟಣ ರಸ್ತೆಯಲ್ಲಿದೆ. ಈ ಹೋಬಳಿಯಲ್ಲಿ ಕಿಕ್ಕೇರಿಯೇ ದೊಡ್ಡ ಗ್ರಾಮ.

ಕೀಕ ಎಂಬವನ ಹೆಸರಿನಿಂದ ಕಿಕ್ಕೇರಿ ಎಂಬ ಹೆಸರು ಬಂದುದಾಗಿ ಐತಿಹ್ಯವಿದೆ. ಇಲ್ಲಿ ಒಂದು ರಮ್ಯವಾದ ಕೆರೆಯಿದೆ. ಇಲ್ಲಿಯ ಹೊಯ್ಸಳ ಕಾಲೀನ ದೇವಾಲಯಗಳಲ್ಲಿ ಬ್ರಹ್ಮೇಶ್ವರ ದೇವಾಲಯ ಮತ್ತು ಜನಾರ್ಧನ ದೇವಾಲಯ ಮುಖ್ಯವಾದವು. ಬ್ರಹ್ಮೇಶ್ವರ ದೇವಾಲಯವನ್ನು ಬಮ್ಮರಿ-ನಾಯಕಿತ್ತಿ ಎಂಬವಳು 1171ರಲ್ಲಿ ಹೊಯ್ಸಳರಾಜ ಒಂದನೆಯ ನರಸಿಂಹನ ಕಾಲದಲ್ಲಿ ಕಟ್ಟಿಸಿದಳು. ಈ ಕಟ್ಟಡದ ನಿರ್ಮಾಣ ವೈಶಿಷ್ಟ್ಯಪೂರ್ಣವಾಗಿದೆ. ಇದರ ಹೊರವಲಯ ಹೊರಗಡೆಗೆ ಉಬ್ಬಿದಂತಿವೆ. ಒಳಭಾಗದಲ್ಲಿ ವಿಶಾಲವಾದ ಹಜಾರವಿದೆ. ಇದು ಏಕಕೂಟಾಚಲ. ನವರಂಗದಲ್ಲಿರುವ ನಾಲ್ಕು ಅಡಿ ಎತ್ತರದ ವಿಷ್ಣುವಿಗ್ರಹ ಉತ್ತಮ ಕೈಚಳಕವನ್ನು ಪ್ರದರ್ಶಿಸುತ್ತದೆ. ನವರಂಗದ ಕಂಬಗಳ ಮೇಲೆ ಕೊರೆದಿರುವ ಮದನಿಕೆ ವಿಗ್ರಹಗಳು ಜೀವಂತವಾಗಿರುವಂತೆ  ಕಾಣುವ ಉತ್ತಮ ಕಲಾಕೃತಿಗಳು. ನವರಂಗದ ಚಾವಣಿಯ ತಳಭಾಗದಲ್ಲಿ 9 ಭುವನೇಶ್ವರಿಗಳಿವೆ. 8 ದಿಕ್ಕುಗಳಲ್ಲಿರುವ ಭುವನೇಶ್ವರಿಗಳು ಮಧ್ಯಭಾಗದ ಚೌಕಕಾರದ ಭುವನೇಶ್ವರಿಯನ್ನು ಸುತ್ತುವರಿದಿದೆ. ಅವುಗಳಲ್ಲಿ ಅಷ್ಟದಿಕ್ಪಾಲಕರ ಮತ್ತು ನವಗ್ರಹಗಳ ಶಿಲ್ಪಗಳನ್ನು ಕೆತ್ತಲಾಗಿದೆ. ಗೋಡೆಗಳ ಮೇಲೆ ದೇವತೆಗಳ ಚಿತ್ರಗಳನ್ನು ಅಂದವಾಗಿ ಕೆತ್ತಲಾಗಿದೆ.

ಬ್ರಹ್ಮೇಶ್ವರ ದೇವಾಲಯವಲ್ಲದೆ ಎರಡು ನರಸಿಂಹ ದೇವಾಲಯಗಳೂ ಈ ಹಳ್ಳಿಯ ಆರಾಧ್ಯದೇವತೆ ಕಿಕ್ಕೇರಮ್ಮನ ದೇವಾಲಯವೂ ಭವ್ಯ ಕೆತ್ತನೆಗಳಿಂದ ಕೂಡಿವೆ. ಕಿಕ್ಕೇರಮ್ಮನ ಜಾತ್ರೆ ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಈ ದೇವತೆಗೆ ಯಾವ ಪ್ರಾಣಿಗಳನ್ನೂ ಬಲಿಕೊಡುವುದಿಲ್ಲ. ಇಲ್ಲಿ 15 ಒಕ್ಕಲಿಗ ಕುಟುಂಬಗಳು ಸರದಿಯ ಪ್ರಕಾರ ಈ ದೇವಸ್ಥಾನದ ಅರ್ಚಕರಾಗಿ ಪೂಜೆ ನಡೆಸುತ್ತಾರೆ. ಜೀರ್ಣವಾದ ಒಂದು ಪುರಾತನ ಕೋಟೆಯೂ ಇಲ್ಲಿದೆ.

ಈ ಹೋಬಳಿಯ ಜನರ ಮುಖ್ಯ ಕಸಬು ವ್ಯವಸಾಯ, ಮುಂಗಾರು ಬೆಳೆಗಳಾದ ರಾಗಿ, ಜೋಳಗಳನ್ನು ಬೆಳೆಯುತ್ತಾರೆ. ಕಬ್ಬು, ತೆಂಗು, ಬಾಳೆ ಉಳಿದ ಮುಖ್ಯ ಬೆಳೆಗಳು. ಹತ್ತಿ ನೂಲುವುದು, ನೇಯುವುದು ಮತ್ತು ರೇಷ್ಮೆ ದಾರಗಳನ್ನು ತೆಗೆಯುವುದರಲ್ಲಿ ಕಿಕ್ಕೇರಿ ಹೆಸರುವಾಸಿಯಾಗಿದೆ. ಇಲ್ಲಿ 9 ಸಹಕಾರ ನೇಯ್ಗ ಸಂಘ ತಳಿವೆ. ಹಿಂದುಗಳೂ ಮುಸ್ಲಿಮರೂ ಈ ಗ್ರಾಮದಲ್ಲಿ ವಾಸಿಸುತ್ತಾರೆ.

ಕಿಕ್ಕೇರಿ ಗ್ರಾಮದಲ್ಲಿ ಮೂರನೆಯ ದರ್ಜೆಯ ಪ್ರವಾಸಿಮಂದಿರ, ಸಾರ್ವಜನಿಕ ಆರೋಗ್ಯಕೇಂದ್ರ, ಪಶುಚಿಕಿತ್ಸಾಲಯ ಮತ್ತು ಒಂದು ಪ್ರೌಢಶಾಲೆ ಇವೆ. ಇಲ್ಲಿ ಪ್ರತಿ ಶುಕ್ರವಾರ ಸಂತೆ ನಡೆಯುತ್ತದೆ.

(ಪಿ.ಎಚ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ